ಚೀನೀ ಸಾಹಿತ್ಯ

	ಪ್ರಪಂಚದ ಪ್ರಾಚೀನ ಸಾಹಿತ್ಯಗಳಲ್ಲೊಂದು. ಕ್ರಿಸ್ತ ಪೂರ್ವ ಕಾಲದಿಂದಲೂ ಇದು ಅವಿಚ್ಛನ್ನವಾಗಿ ಸಾಗಿಬಂದಿದೆ. ಚೀನೀ ಸಾಹಿತ್ಯವನ್ನು ಅದರ ಬಹುಮುಖ ವೈವಿಧ್ಯವನ್ನು ಗಮನಿಸದೆ ಅಧ್ಯಯನ ಮಾಡಲು ಸಾಧ್ಯವಿಲ್ಲ. ಚೀನ ಕಾಗದ ಹಾಗೂ ಮುದ್ರಣವನ್ನು ಕಂಡುಹಿಡಿದ ಮೊಟ್ಟಮೊದಲು ದೇಶ; ಅದು ಗ್ರಂಥಗಳ ನಾಡು. ಹಾನ್ ಸಮ್ರಾಟ ಜುಂಗ್ (ಕ್ರಿ.ಪೂ. 32-7) ಚೀನದಲ್ಲಿ ರಚಿತವಾದ ಎಲ್ಲ ಗ್ರಂಥಗಳನ್ನು ಸಂಗ್ರಹಿಸುವಂತೆ ಅಪ್ಪಣೆ ಮಾಡಿದ. ಅವನ ಇಬ್ಬರು ಸಚಿವರಾದ ಲಿಯು ಷಿಯುಂಗ್ ಮತ್ತು ಲಿಯು ಷಿನ್ (ತಂದೆ ಮತ್ತು ಮಗ) ದೇಶಾದ್ಯಂತ ಸಂಗ್ರಹಿಸಿದ ಗ್ರಂಥಗಳನ್ನು ಸಾರಾಂಶಗೊಳಿಸಿ ಸಾಮ್ರಾಟನಿಗಾಗಿ ಗ್ರಂಥಸೂಚಿಯೊಂದನ್ನು ತಯಾರಿಸಿದರು. ಹಾನ್ ಸಂತತಿಯ (ಕ್ರಿ.ಪೂ. 206 ರಿಂದ ಕ್ರಿ.ಶ.220) ಪ್ರಸಿದ್ಧ ಇತಿಹಾಸಕಾರ ಬಾನ್ ಗೂ (ಕ್ರಿ.ಶ. 32-92) ಹಾನ್ ಸಂತತಿಯ ಹಾನ್ ಷು ಅಧಿಕೃತ ಇತಿಹಾಸ ಗ್ರಂಥದಲ್ಲಿ 13,269 ಮುಖ್ಯ ಗ್ರಂಥಗಳನ್ನು ದಾಖಲೆ ಮಾಡಿದ್ದಾನೆ. ಕ್ರಿ.ಶ. 2ನೆಯ ಶತಮಾನಕ್ಕೆ ಹಿಂದೆ ಚೀನದಲ್ಲಿ ಬರೆದ ಗ್ರಂಥಗಳ ಸಂಖ್ಯೆ ಅಷ್ಟು ಅಪಾರ. ಮಿಂಗ್ ಸಂತತಿಯ ಸಮ್ರಾಟ ಜಂಗ್-ಟ್ಸು (ಕ್ರಿ.ಶ. 1403-1424) ಹಾನ್ ಸಂತತಿಯ ಜಂಗನ ಆದೇಶವನ್ನು ಮುಂದುವರಿಸಿದಾಗ ಕ್ರಿ.ಶ. 1403-1406ರ ನಡುವೆ ಒಂದು ದಶಲಕ್ಷ ಗ್ರಂಥಗಳು ರಾಜ್ಯದ ಎಲ್ಲ ಭಾಗಗಳಿಂದ ಸಂಗ್ರಹವಾಗಿ ಪೀಕಿಂಗ್ ನಗರದ ಹೊಸ ಅರಮನೆಯ ಗ್ರಂಥಾಲಯವನ್ನು ಸೇರಿದವು. ಈ ಸಂಗ್ರಹವನ್ನು ಯುಂಗ್-ಲಿ-ಟ-ಟಿಯೆನ್ (ಯುಂಗ್ ಲಿ ಯುಗದ ಅಮೋಘ ಸಂಗ್ರಹ) ಎಂದು ಕರೆದಿದ್ದಾರೆ. ಈ ಸಂಗ್ರಹದಲ್ಲಿ ಅನೇಕ ಗ್ರಂಥಗಳು ಬಿಟ್ಟು ಶತ್ರುಗಳು ನಡೆಸಿದ ವಿನಾಶಕಾರಿ ದಾಳಿಗಳಿಂದ ನಾಶವಾದವು. ಆದರೂ ಕ್ರಿ.ಶ. 1750ಕ್ಕೆ ಹಿಂದೆ ಚೀನದಲ್ಲಿ ರಚಿತವಾದ ಅಥವಾ ಮುದ್ರಿತವಾದ ಗ್ರಂಥಗಳಿಗಿಂತ ಹೆಚ್ಚೆಂದು ಚೀನೀ ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಅನೇಕ ರಾಷ್ಟ್ರಗಳಲ್ಲಿ ಕೆಲವು ಶತಮಾನಗಳ ಹಿಂದಿನ ಕೃತಿಗಳನ್ನು ಅಭಿಜಾತ ಸಾಹಿತ್ಯವೆಂದು ಕರೆಯುತ್ತಾರೆ; ಅವು ತೀರ ಹಳೆಯವೆಂಬುದು ಅಲ್ಲಿನವರ ಅಭಿಪ್ರಾಯ. ಆದರೆ ಕ್ರೈಸ್ತಯುಗ ಪ್ರಾರಂಭವಾಗುವುದಕ್ಕೆ ಅನೇಕ ಶತಮಾನಗಳ ಹಿಂದೆ ಜೀವಿಸಿದ್ದ ಕಾನ್‍ಫ್ಯೂಷಸ್ ಮತ್ತು ಇತರ ದಾರ್ಶನಿಕರ ಕೃತಿಗಳನ್ನು ಚೀನೀಯರು ಸಾಮಾನ್ಯವಾಗಿ ಅಭಿಜಾತ ಸಾಹಿತ್ಯವೆಂದು ಕರೆಯುತ್ತಾರೆ. ಇಂದಿನ ದಿನ ಪ್ರಾಚೀನ ಶೈಲಿಯಲ್ಲಿ ಕವನಗಳನ್ನು ರಚಿಸುವ ಚೀನಿಯರಿರುವ ಕಾರಣ ಅವರ ಕವನಗಳು ಹಳೆಯವೆ ಅಥವಾ ಕ್ರಿ.ಶ. 7ನೆಯ ಶತಮಾನದಲ್ಲಿ ರಚಿತವಾದ ಕವನಗಳು ಹಳೆಯವೆ ಎಂಬುದನ್ನು ನಿರ್ಧರಿಸುವ ಬಗ್ಗೆ ಶಂಕೆಯುಂಟಾಗುತ್ತದೆ. ಇಂಥ ಪ್ರಾಚೀನತೆ ಚೀನಿ ಸಾಹಿತ್ಯಕ್ಕೆ ವಿಶಿಷ್ಟವಾದದ್ದು.

ಚೀನೀ ಸಾಹಿತ್ಯದ ಆದಿಸ್ವರೂಪವನ್ನು ಆರಂಭದ ಕಾವ್ಯದಲ್ಲಿ ಕಾಣಬಹುದು. ಅಂಥ ಕಾವ್ಯವನ್ನು ಕೆಲವು ಆಂಗ್ಲ ಸಾಹಿತ್ಯ ವಿಮರ್ಶಕರು ಸಾಮಾನ್ಯ ಭಾಷೆಯ ಅಲಂಕಾರಿಕ ಶೈಲಿ ಎಂದಿದ್ದಾರೆ. ಈ ವಿಧವಾದ ಶೈಲಿಯಲ್ಲಿ ಷಾಂಗ್ ಸಂತತಿಯ ಕಾಲಕ್ಕೆ (ಕ್ರಿ.ಪೂ. 1766-1402) ಸಂಬಂಧಿಸಿದ, ಮೂಳೆಯ ಚೂರುಗಳ ಮೇಲೆ ಕೊರೆದಿರುವ ಮರಗಳೂ ಸೇರಿವೆ. ಆದರೆ ಚೀನೀ ಸಾಹಿತ್ಯಕ್ಕೆ ದಾರಿ ಮಾಡಿ ಕೊಟ್ಟಿದ್ದು ಷೂ-ಜಿಂಗ್ (ಕಾವ್ಯಗ್ರಂಥ). ಅದು ಚೌ ಸಂತತಿಯ (ಕ್ರಿ.ಪೂ. 1122-247) ಕಾಲದಲ್ಲಿ ಜೀವಿಸಿದ್ದ ಅನಾಮಿಕ ಕವಿಗಳು ರಚಿಸಿದ ಕವನಗಳ ಮತ್ತು ಹಾಡುಗಳ ಸಂಕಲನ. ಈ ಕವನ ಸಂಕಲನದ ಸಂಪಾದಕ ಕಾನ್‍ಫ್ಯೂಷಸ್ (ಕ್ರಿ.ಪೂ. 551-479). ಅವನು ತನಗೆ ದೊರೆತ ಮೂರು ಸಾವಿರಕ್ಕೂ ಹೆಚ್ಚಿನ ಕವನಗಳಲ್ಲಿ 305 ಕವನಗಳನ್ನು ಆರಿಸಿಕೊಂಡ ಗ್ರಂಥದ ಪೀಠಿಕೆಯಲ್ಲಿ ಅವನು ಕವಿತೆಯನ್ನು ಚಿಹ್ ಅಥವಾ ಶ್ರದ್ಧಾಪೂರ್ಣಚಿಂತನೆಯ ಮೌಖಿಕ ಅಭಿವ್ಯಕ್ತಿ ಎಂದಿದ್ದಾನೆ. (1) ಘಟನೆಗಳು ಒಳ್ಳೆಯವಾಗಿರಲಿ, ಕೆಟ್ಟವಾಗಿರಲಿ, ಸರಿಯಾದುವಾಗಿರಲಿ, ತಪ್ಪಾದುವಾಗಿರಲಿ, ಯಶಸ್ವಿನಿಂದ ಕೂಡಿರಲಿ ಅಥವಾ ಅಪಜಯ ಸೂಚಕವಾಗಿರಲಿ-ಅವುಗಳ ಬಗ್ಗೆ ಎಚ್ಚರಿಕೆ ನೀಡುವುದು; (2) ಸ್ವರ್ಗ ಮತ್ತು ಭೂಲೋಕಗಳ ಗಮನವನ್ನು ಸೆಳೆದು ದೇವದಾನವರ ಭಾವನೆಗಳನ್ನು ಬಡಿದೆಬ್ಬಿಸುವುದು; (3) ಗಂಡಹೆಂಡಿರ ಬಾಂಧವ್ಯವನ್ನು ಕ್ರಮಗೊಳಿಸುವುದು, ತಾಯಿತಂದೆಗಳಲ್ಲಿ ಭಕ್ತಿ, ಹಿರಿಯರಲ್ಲಿ ಗೌರವ, ಪೂರ್ಣ ಸಾಮಾಜಿಕ ಸಾಮರಸ್ಯ, ಸಂಸ್ಕøತಿ ಮತ್ತು ನಾಗರಿಕತೆಗಳ ಅಭಿವೃದ್ಧಿ, ಪರಂಪರೆ ಮತ್ತು ಸಂಪ್ರದಾಯಗಳನ್ನು ಯುಕ್ತರೀತಿಯಲ್ಲಿ ಸಾಗಿಸುವುದು-ಇವು ಕವಿತೆಯ ಕರ್ತವ್ಯವೆಂದು ಕಾನ್‍ಫ್ಯೂಷಸ್ ತಿಳಿಸುತ್ತಾನೆ.

	ಇವೇ ವಿಚಾರಗಳಿಂದ ಪ್ರಭಾವಿತರಾದ, ಅನಂತರ ಬಂದ ಕಾನ್‍ಫ್ಯೂಷಸ್ ಅನುಯಾಯಿಗಳು, ಷೂ-ಜಿಂಗ್ ಸಂಗ್ರಹದ ಕಾವ್ಯನಿಯಮಗಳನ್ನು ಚೀನ ಸಾಮ್ರಾಜ್ಯದ ಎಲ್ಲ ಬುದ್ಧಿಜೀವಿಗಳು ಅನುಸರಿಸಬೇಕೆಂದು ವಿಧಿಸಿದರು.

	ಕಾನ್‍ಫ್ಯೂಷಸ್ ಅಂದು ಕಾವ್ಯಕ್ಕೆ ಗೊತ್ತುಪಡಿಸಿದ ನಿಯಮಗಳು ಕೇವಲ ಧಾರ್ಮಿಕ ಆದರ್ಶಗಳೆನಿಸಿಕೊಂಡಿವೆ. ಕಳೆದ ಎರಡು ಸಾವಿರ ವರ್ಷಗಳಿಂದ ಕಾವ್ಯ ಬಹುಮಟ್ಟಿಗೆ ವಿಲಾಸಜೀವಿಗಳಾದ ಶ್ರೀಮಂತರ ಮನೋರಂಜನೆಯ ಸಾಧನವೆನಿಸಿಕೊಂಡಿದೆ. ಮೊದಲು ಕವಿಗಳು ಸಮ್ರಾಟನ ಆಸ್ಥಾನದಲ್ಲಿ ಹಾಡುವ ಸಂಪ್ರದಾಯವಿತ್ತು. ಚೀನೀ ಅರಸರು ಒಳ್ಳೆಯ ಇಲ್ಲವೆ ತಕ್ಕಮಟ್ಟಿನ ಕವನಗಳನ್ನು ರಚಿಸುವ ಸಾಮಥ್ರ್ಯ ಹೊಂದಿದ್ದರು. ಅವರಲ್ಲಿ ಟ್ಸೌ-ಟ್ಸೌ (ಕ್ರಿ.ಶ. 155-220) ಟ್ಸೌ ಪೀ (ಕ್ರಿ.ಶ. 187-226) ಮತ್ತು ಲೀ ಯೂ (ಕ್ರಿ.ಶ. ? 978) ಇವರಂಥ ಸಮ್ರಾಟರು ಒಳ್ಳೆಯ ಕವಿಗಳಾಗಿದ್ದರು. ಚೀನಿ ಸಾಮ್ರಾಟರ ಆಸ್ಥಾನದಲ್ಲಿ ಆಶ್ರಯ ಪಡೆದ ಅನೇಕ ಕವಿಗಳು ಚೀನೀ ಕಾವ್ಯದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರನ್ನು ಆಸ್ಥಾನ ಕವಿಗಳೆಂದು ಕರೆಯಬಹುದು. ಅರಸರ ಹಿರಿಮೆ, ಪ್ರತಾಪ ಹಾಗೂ ವೈಭವಗಳನ್ನಲ್ಲದೆ ಮತ್ತೇನನ್ನೂ ಈ ಕವಿಗಳು ತಮ್ಮ ಕಾವ್ಯ ವಿಷಯವನ್ನಾಗಿ ಮಾಡಿಕೊಳ್ಳಲಿಲ್ಲ. ಅವರ ಬರೆವಣಿಗೆಯಲ್ಲಿ ಶಬ್ದಾಡಂಬರ, ಸಾಂಪ್ರದಾಯಿಕತೆ ಹೆಚ್ಚು. ಆದ್ದರಿಂದಲೇ ಆ ಶೈಲಿಯಲ್ಲಿ ಸ್ವಾಭಾವಿಕತೆ ಕಾಣುವುದಿಲ್ಲ. ಟಾಂಗ್ ಸಂತಿಯ (ಕ್ರಿ.ಶ. 618-907) ಸಮ್ರಾಟರು ಆಳುತ್ತಿದ್ದ ಕಾಲಕ್ಕೆ ಹಿಂದೆಯೇ ಅಸ್ಥಾನದಲ್ಲಿ ಕಾವ್ಯದ ಸ್ವರೂಪದ ಬಗ್ಗೆ ಕಟ್ಟುನಿಟ್ಟಾದ ನಿಯಮಗಳನ್ನು ರಚಿಸಿ, ಒಂದೇ ಮಾದರಿಯ ರಚನೆಗಳ ಕ್ರಮವನ್ನು ರೂಢಿಗೆ ತಂದರು. ಎಲ್ಲ ಕವಿಗಳೂ ತಮ್ಮ ಮನೋಭಾವಗಳನ್ನು ಅಥವಾ ಶುದ್ಧ ಚಿಂತನೆಯನ್ನು ನಿಯಮಬದ್ಧ ಚೀನೀ ಕಾವ್ಯ ರಚನೆಗೆ ಒಳಪಡಿಸಬೇಕಾಗಿತ್ತು. ಇಂಥ ರಚನೆ ಕ್ರಮವಾದ ಐದು ಅಥವಾ ಏಳು ಪದಗಳ ಪಾದಗಳಿಂದ ಹಿಡಿದು ಒಂದೇ ಮಾದರಿಯ ಕ್ರಮ ರಹಿತ ಸಾಲುಗಳನ್ನು ಉಳ್ಳದ್ದು. ಕವನದ ಪದಗಳು ಕ್ರಮಬದ್ಧವಾಗಿರಲಿ ಕ್ರಮ ವಿಹೀನವಾಗಿರಲಿ, ಕವಿಗಳು ಕ್ಲುಪ್ತ ಮಾದರಿಯ ಪ್ರಾಸಯೋಜನೆ, ಕ್ಲುಪ್ತ ಪದ ವಿನ್ಯಾಸ, ಕ್ಲುಪ್ತ ಸಂಖ್ಯೆಯ ಶಬ್ದಗಳು ಹಾಗೂ ಶಬ್ದಗಳಿಗೆ ಕ್ಲುಪ್ತ ಸ್ವರ ಸಂಯೋಜನೆ-ಇವನ್ನು ಅನುಸರಿಸಬೇಕಾಗಿತ್ತು. ಅದೃಷ್ಟವಶಾತ್ ಚೀನೀ ಭಾಷೆ ಕಾವ್ಯಯೋಗ್ಯವಾದದ್ದು. ಈ ಭಾಷೆ ಕಾವ್ಯಕ್ಕೆ ಉತ್ತಮ ಇಂಪನ್ನು ನೀಡುವುದಾಗಿದೆ. ಕಾವ್ಯರಚನೆಗೆ ಬೌದ್ಧಿಕ ಸಾಮಥ್ರ್ಯವೂ ಅಗತ್ಯ. ಇಂಥ ಶ್ರೇಷ್ಠ ಚೀನೀ ಕಾವ್ಯ ಪರಂಪರೆಯಲ್ಲಿ ಉತ್ತಮ ಕೃತಿಗಳು ರಚನೆಯಾಗಿವೆ. ಅವನ್ನು ಇತರ ಸಾಹಿತ್ಯಗಳಲ್ಲಿನ ಶ್ರೇಷ್ಠ ಕೃತಿಗಳೊಂದಿಗೆ ಹೋಲಿಸಬಹುದು.

	ಚೀನದ ಮೊದಲ ಖ್ಯಾತ ಕವಿ ಜೂ ಯುಆನ್ (ಕ್ರಿ.ಪೂ. 340?-280?). ಅವನ ಆದರ್ಶಗಳಿಗೆ ನಿಕಟವಾಗಿವೆ. ಅವನು ಚು ರಾಜ್ಯದ ದೇಶಪ್ರೇಮಿ ಆಸ್ಥಾನಿಕ. ದುಷ್ಟರ ಬೋಧನೆಗಳಿಗೆ ತನ್ನ ಅರಸ ಕಿವಿಗೂಡದಂತೆ ಪ್ರಭಾವಯುಕ್ತವೂ ಸುಮಧುರವೂ ಆದ ಕವನಗಳನ್ನು ರಚಿಸಿದ್ದಾನೆ. ಕೊನೆಗೆ ತನ್ನ ಆಸೆಗಳೆಲ್ಲ ಭಂಗವಾಗಿ ಶತ್ರುಗಳ ಆಕ್ರಮಣದಿಂದ ದೇಶ ಅಪಮಾನಕ್ಕೀಡಾಗಲು ಅವನು ನದಿಯಲ್ಲಿ ದುಮುಕಿ ಪ್ರಾಣ ನೀಗಿದನೆನ್ನಲಾಗಿದೆ. ಈಗಲೂ ಸಹ ಸರ್ಪ-ನೌಕೆ ಹಬ್ಬದ (ಡ್ರ್ಯಾಗನ್ ಬೋಟ್ ಫೆಸ್ಟಿವಲ್) ಕಾಲದಲ್ಲಿ ಚೀನಿಯರು ಅವರ ಜನ್ಮದಿನವನ್ನು ಆಚರಿಸುತ್ತಾರೆ. ಜೂ ಯುಆನ್ ವಾಣಿ ಇದು-

	ವಂಚಕರ ಹೇಯ ವರ್ತನೆಯನ್ನನುಸರಿಸುವುದಕ್ಕಿಂತ
	ದೇಶಭ್ರಷ್ಟನಾಗಿ ಸಾವನ್ನಪ್ಪುವುದೇ ಲೇಸು ಲೇಸೆನಗೆ

	ಸತ್ಯಮಾರ್ಗವನ್ನು ಬಿಡದ ಇಂಥ ಭವ್ಯ ಭಾವನೆಗಳು ಚೀನದ ಮಾನವೀಯ ಕವಿಗಳ ಶ್ರೇಣಿಯನ್ನು ಪ್ರಜ್ವಲಿಸಿವೆ. ನೀತಿಗೆಟ್ಟ ಅರಸರಿಗಾಗಿ ಕಾವ್ಯ ರಚಿಸುವಾಗ ಅವರು ತಮ್ಮ ಆತ್ಮಸಾಕ್ಷಿಗೆ ದ್ರೋಹವೆಸಗಿಲ್ಲ.

					ಹುಳಿಹೆಂಡ, ಕೊಳೆತು ನಾರುವ ಮಾಂಸ
	ಶ್ರೀಮಂತ ಭವನಗಳ ಹಿಂದೆ,
	ಮಂಜುಮುಸುಕಿ ಸೆಡೆತ ಶವಗಳು
	ಹಾದಿಬೀದಿಗಳಲಿ ರಾಶಿ ರಾಶಿ!
	ಹಿಗ್ಗಿನಾಸಿರಿ, ಕುಗ್ಗಿದಾ ಬಡತನಕೆ
	ಹಲವು ಮರುಗಳ ಅಂತರ!

	ಮೇಲಿನ ಸಾಲುಗಳಲ್ಲಿ ಡೂ-ಫೂ (ಕ್ರಿ.ಶ. 712-770) ಜೂ ಯುಆನ್ ಕವಿಯ ವಾಣಿಯನ್ನು ಮರುನುಡಿದಿದ್ದಾನೆ. ಡೂಫೂ ಕವಿ ಮಾತ್ರವೇ ಲೀ ಬೋ (710-782) ಬೈ ಚು ಯೀ (772-843), ಸೂ ಷಿರ್ (1036-1101), ಲು ಯು (1125-1210) ಹಾಗೂ ಇತರ ಕವಿಗಳೊಡನೆ ಚೀನೀ ಕಾವ್ಯದ ಅಮೋಘ ಪರಂಪರೆಯನ್ನು ಸ್ಥಾಪಿಸಿದ. ಇವರ ಕವನಗಳು ಮಾನವೀಯತೆ ಹಾಗೂ ಮನೋಭಾವಗಳ ಅಭಿವ್ಯಕ್ತಿಗೆ ಪ್ರಸಿದ್ಧವಾಗಿರುವುದಲ್ಲದೆ ಮನಮೋಹಕವಾಗಿಯೂ ಸ್ವಾಭಾವಿಕವಾಗಿಯೂ ಇವೆ.

	ಇಷ್ಟಾದರೂ ಈ ಕವಿಗಳು ಜನತೆಯ ಮನವೊಲಿಸಿಕೊಂಡವರಲ್ಲ, ಹೆಚ್ಚೆಂದರೆ ಅವರು ಮಧ್ಯಮವರ್ಗದ ಪಂಡಿತರಾಗಿದ್ದರೆಂದು ಹೇಳಬಹುದು; ಅವರು ಚೀನದ ರಾಜರುಗಳ ಆಸ್ಥಾನಗಳಿಗೆ ಸೇರಿದವರು. ಸಮಾಜದಲ್ಲಿ ಮಧ್ಯಮವರ್ಗದ ಪ್ರತಿಯೊಬ್ಬ ಪಂಡಿತನೂ ಉನ್ನತ ಅಂತಸ್ತನ್ನು ಹೊಂದಬೇಕೆಂಬ ಆಕಾಂಕ್ಷೆಯನ್ನು ಬಾಲ್ಯದಿಂದ ಹೊಂದಿರುತ್ತಿದ್ದ. ಈ ಆಕಾಂಕ್ಷೆಗಳು ಫಲಿಸದಿದ್ದಾಗ ಮಾತ್ರ ಅವನ ದೇಶದ ನೈಜಪರಿಸ್ಥಿತಿಯನ್ನರಿತುಕೊಳ್ಳುತ್ತಿದ್ದ. ಈ ಪಂಡಿತವರ್ಗ ಮಾತ್ರ ರಾಜಾಶ್ರಯದಿಂದ ಹೊರಬರಲಿಲ್ಲ. ತೀವ್ರ ಅಸಮಾಧಾನ ಮತ್ತು ಕೋಪದಲ್ಲಿ ಸಹ ಅವರ ಪ್ರತಿಭಟನೆ ಅರೆಮನಸ್ಸಿನದಾಗಿತ್ತು. ನೈಜಪರಿಸ್ಥಿತಿಯನ್ನು ಮರೆಯುವ ಪ್ರಯತ್ನದಲ್ಲಿ ಅವರು ಪರಸ್ಪರ ಸಂಧಿಸಿ ದೀರ್ಘಕಾಲ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು; ಮದ್ಯಸೇವನೆಯಿಂದ ಮೈಮರೆತುಕೊಳ್ಳುತ್ತಿದ್ದರು. ಸ್ಫ್ಪೂರ್ತಿಬಂದಾಗ ಅಮೋಘ ಕಾವ್ಯವನ್ನು ರಚಿಸುತ್ತಿದ್ದರು. ಆಂಗ್ಲ ಕವಿಗಳಂತೆ ಚೀನೀ ಕವಿಗಳು ಅದ್ಭುತರಮ್ಯ ಭಾವನೆಗಳನ್ನು ಅಭಿವ್ಯಕ್ತಿಸಿಲ್ಲ. ಅವರಿಗೆ ಪ್ರಣಯಾನುಭವವೆ ಇಲ್ಲವೆನ್ನುವಷ್ಟರ ಮಟ್ಟಿಗೆ ಅವರ ಕವನಗಳು ಪ್ರಣಯಶೂನ್ಯವಾಗಿವೆ. ಆದಾಗ್ಯೂ ಅವರು ಸ್ತ್ರೀ ಸೌಂದರ್ಯವನ್ನು ಕಾವ್ಯದಲ್ಲಿ ವರ್ಣಿಸಲಾರದಷ್ಟು ಅರಸಿಕರಾಗಿರಲಿಲ್ಲ. ಅವರ ಕವನಗಳಲ್ಲಿ ಅನೇಕವು ಪ್ರಸಿದ್ಧ ಸುಂದರಿಯರ ವರ್ಣನೆಗೆ ಮೀಸಲಾಗಿದೆ. ಎಲ್ಲಕ್ಕೂ ಮಿಗಿಲಾಗಿ, ಚೀನೀ ಕವಿಗಳು ತಮ್ಮ ನಾಡ ಸೊಬಗಿಗೆ ಮೈಮರೆತವರು, ಮನಸೋತವರು. ದೇಶದ ಬಗ್ಗೆ ಘನವಾದ ಭಾವನೆಗಳು ಅವರ ಕವನಗಳಿವೆ. ಹಳದಿ ನದಿಯ ತಟದಿಂದ ಹಿಡಿದು ಹೈನಾನ್ ದ್ವೀಪದವರೆಗಿನ ಚೀನೀ ನಾಡಿನ ಭವ್ಯ ಸೌಂದರ್ಯವನ್ನು ಅವರ ಭಾವಗೀತೆಗಳು ಮನಮೋಹಕವಾಗಿ ವರ್ಣಿಸುತ್ತವೆ.

	ಟಾಂಗ್ ಸಂತತಿಯ ಕಾಲವನ್ನು ಕಾವ್ಯದ ಸುವರ್ಣಯುಗವೆಂದು ಕರೆಯುತ್ತಾರೆ. ಆದರೆ ಈ ರಾಜಸಂತತಿಯ ತರುವಾಯ ಬಂದ ಸೂಂಗ್ ಸಂತತಿಯ (960-1279) ಕಾಲದಲ್ಲಿ ಹೆಚ್ಚು ಸಾಮರಸ್ಯವೂ ಸುಮಧುರವೂ ಆದ ಕವನಗಳು ರಚನೆಯಾದವು. ರಚನಾತಂತ್ರ ಪರಿಪೂರ್ಣತೆಯುತ್ತ ಮತ್ತಷ್ಟು ಸಾಗಿತು. ಛಂದಸ್ಸಿನ ನಿಯಮಗಳಿಗೆ ಬದ್ಧವಲ್ಲದ ಸರಳ ಧಾಟಿಯ ಸಾಲುಗಳು ಕವನದಲ್ಲಿ ಕಾಣಿಸಿಕೊಂಡವು. ಅದರಿಂದ ಚೀನೀ ಕಾವ್ಯಶೈಲಿ ಶ್ರೀಮಂತಗೊಂಡಿತು. ಈ ಕಾಲದಲ್ಲಿ ಸೂಷಿರ್ ಮತ್ತು ಲು ಯು ಕವಿಗಳು ಮಾತ್ರವಲ್ಲದೆ ಲೀ ಟಿಂಗ್-ಚೌ (1081-1145) ಎಂಬ ಪ್ರಸಿದ್ಧ ಕವಯಿತ್ರಿ ಇದ್ದಳು. ಚೀನೀ ಸಾಹಿತ್ಯಕ್ಕೆ ಅಮೋಘ ಕೊಡುಗೆಯನ್ನು ನೀಡಿದ ಸ್ತ್ರೀಯರಲ್ಲಿ ಆಕೆಯೂ ಒಬ್ಬಳು.

	ಚೀನದಲ್ಲಿ ಗದ್ಯರಚನೆ ಚೀನಿ ಕಾವ್ಯದಷ್ಟೆ ಹಳೆಯದು. ಚೀನೀ ಇತಿಹಾಸದ ಜನ್-ಚಿಯು (ವಸಂತ ಮತ್ತು ಮಾಗಿ) ಹಾಗೂ ಚಾನ್ ಕ್ವೊ (ಯುದ್ಧಾಸಕ್ತ ರಾಷ್ಟ್ರಗಳ) ಕಾಲದಲ್ಲಿ (ಕ್ರಿ.ಪೂ. 722-247), ಅದರಲ್ಲೂ ವಿಶೇಷವಾಗಿ ಕ್ರಿ.ಪೂ. 6ನೆಯ ಶತಮಾನದಿಂದ ಹಿಡಿದು 3ನೆಯ ಶತಮಾನದವರೆಗೆ ಪ್ರಖ್ಯಾತ ದಾರ್ಶನಿಕರನೇಕರು ಕಾಣಿಸಿಕೊಂಡರು. ಲೌ-ಡ್ಜು. ಕಾನ್‍ಫ್ಯೂಷಸ್, ಮೆನ್‍ಷಿಯಸ್, ಜು ಆಂಗ್ ಡ್ಜು, ಷನ್ ಡ್ಜ ಮತ್ತು ಮೋಡ್ಜ-ಇವರು ದಾರ್ಶನಿಕರಲ್ಲಿ ಕೆಲವರು. ಅವರೆಲ್ಲ ಬಿಗಿಯಾದ ಗದ್ಯದಲ್ಲಿ ತಮ್ಮ ಸಿದ್ಧಾಂತಗಳನ್ನು ಬರೆದರು (ಕೆಲವು ಸಂದರ್ಭಗಳಲ್ಲಿ ಅವರ ಶಿಷ್ಯರು ಅವರ ಸಿದ್ಧಾಂತಗಳನ್ನು ಸಂಗ್ರಹಿಸಿದ್ದಾರೆ.). ಈ ದಾರ್ಶನಿಕರ ಕೃತಿಗಳಲ್ಲಿ ಅನೇಕವು ಡ್ಜೋ ಚಿವೋ ಮಿಂಗ್ ರಚಿಸಿದ ಡ್ಜೊ ಚು ಆನ್ ಗ್ರಂಥದಲ್ಲಿಯೂ ಡ್ಜೋ-ಮಾ, ಚೀನ್ (ಕ್ರಿ.ಪೂ. 145-?) ರಚಿಸಿದ ಷಿಹಿ-ಚೀ ಗ್ರಂಥದಲ್ಲೂ ಸಂಗ್ರಹವಾಗಿವೆ. ವಿಶಿಷ್ಟವಾಗಿ ಷಿಹಿ-ಚೀ ಗ್ರಂಥ ಚೀನೀ ಸಾಹಿತ್ಯ ಚರಿತ್ರೆಯಲ್ಲಿ ಒಂದು ಮೈಲಿಗಳಲ್ಲು. ಅನಾದಿ ಕಾಲದಿಂದ ಹಿಡಿದು ಕ್ರಿ.ಪೂ. ಎರಡನೆಯ ಶತಮಾನದವರೆಗಿನ ಇತಿಹಾಸವನ್ನು ಈ ಗ್ರಂಥ ಚಿತ್ರಿಸುವುದಾದರೂ ಅದು ವಾಸ್ತವಿಕವಾಗಿ ರಾಜಕೀಯ, ಆರ್ಥಿಕ ಸಾಮಾಜಿಕ ಹಾಗೂ ಸಾಂಸ್ಕøತಿಕ ಸಮಸ್ಯೆಗಳನ್ನು ಚರ್ಚಿಸುವ ಉದ್ಗ್ರಂಥ. ಅದರಲ್ಲಿ ಆಖ್ಯಾನಗಳು ಟೀಕೆಗಳಿಂದ ಕೂಡಿವೆ. ಡ್ಜೋ-ಮಾ ಚೀನ್‍ನ ಶೈಲಿ ಸರಳಸುಂದರವಾದದ್ದು.

	ಡ್ಜೋ-ಮಾ ಚಿನ್ ಸ್ಥಾಪಿಸಿ, ಪನ್ ಕು ಮತ್ತು ಇತರ ಇತಿಹಾಸ ಶಾಸ್ತ್ರಜ್ಞರು ಮುಂದುವರಿಸಿದ ಶ್ರೇಷ್ಠಗದ್ಯಪರಂಪರೆ ಬೇಗೆ ಅದೃಶ್ಯವಾಯಿತು. ದಕ್ಷಿಣ ಮತ್ತು ಉತ್ತರ ಚೀನ ರಾಜಸಂತತಿಗಳ ಕಾಲದಿಂದ (ಕ್ರಿ. ಶ. 386-589) ಪಿಯಿನ್-ವೆನ್ ಎಂಬ ವಿಶಿಷ್ಟ ಗದ್ಯಶೈಲಿ ರೂಢಿಗೆ ಬಂತು; ಶಬ್ದಾಡಂಬರ ಈ ಶೈಲಿಯ ಮುಖ್ಯಲಕ್ಷಣ. ಈ ಶೈಲಿ, ಆಂಗ್ಲ ಸಾಹಿತ್ಯದ ದ್ವಿಪದಿಯಂತೆ ಸಮಾಂತರ ವಾಕ್ಯಗಳಿಂದ ಹಾಗೂ ಸರಿ ಸಂಖ್ಯೆಯ ಪದಗಳಿಂದ ಕೂಡಿದೆ. ಗದ್ಯದಲ್ಲಿ ಆಲಂಕಾರಿಕ ಸೊಬಗನ್ನು ತರಲು ಲೇಖಕರು ಸ್ಪಷ್ಟತೆ ಹಾಗೂ ಸ್ವಾಭಾವಿಕ ರಸಭಾವಗಳನ್ನು ಬದಿಗಿಡುತ್ತಿದ್ದರು. ಟಾಂಗ್ ಸಂತತಿಯ ಕಾಲದಲ್ಲಿ ಈ ಆಲಂಕಾರಿಕ ಶೈಲಿಯ ಬಗ್ಗೆ ಚಪಲ ಬಲವಾಗಲು ಅದನ್ನು ಹಾನ್ ಯೂ (788-824) ತೀವ್ರವಾಗಿ ಖಂಡಿಸಿ, ಪ್ರಾಚೀನ ಲೇಖಕರ ಸರಳವಾದ ಹಾಗೂ ಸುಸ್ಪಷ್ಟವಾದ ಶೈಲಿಯನ್ನು ಅನುಸರಿಸಬೇಕೆಂದು ಚಳವಳಿ ಪ್ರಾರಂಭಿಸಿದ. ಈ ಚಳವಳಿಯಿಂದ ಎಂಟು ವರ್ಷಗಳ ಕಾಲ ಶಿಥಿಲಾವಸ್ಥೆಯಲ್ಲಿದ್ದ ಚೀನೀ ಸಾಹಿತ್ಯಕ್ಕೆ ನವಚೇತನ ತಂದನೆಂಬ ಖ್ಯಾತಿ ಹಾನ್ ಯೂಗೆ ಬಂತು. ಇಷ್ಟಾದರೂ ಹಾನ್ ಯೂ ಮತ್ತು ಅವನ ಅನುಯಾಯಿಗಳಿಗೆ ಸಾಂಪ್ರದಾಯಿಕ ಪರಿಸ್ಥಿತಿಯನ್ನು ಸುಧಾರಿಸಲಾಗಲಿಲ್ಲ. ಮಿಂಗ್ (1368-1644) ಮತ್ತು ಚಿಂಗ್ (1614-1911) ಸಂತತಿಗಳ ಕಾಲದಲ್ಲಿ ಚೀನೀ ಗದ್ಯಸಾಹಿತ್ಯದಲ್ಲಿ ಸಾಂಪ್ರದಾಯಿಕ ಶೈಲಿ ಪ್ರಬಲವಾಗಿದ್ದ ಕಾರಣ ಸರ್ಕಾರ ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ಪ-ಕಿ-ವೆನ್ ಅಥವಾ ಎಂಟು ಪಾದದ ಪ್ರಬಂಧವೆಂಬ ವಿಶಿಷ್ಟ ಗದ್ಯಶೈಲಿಯನ್ನು ವಿಧಿಸಲಾಯಿತು. ಪ್ರಬಂಧದಲ್ಲಿರಬೇಕಾದ ಶಬ್ದಸಂಖ್ಯೆಯನ್ನು (ಕೆಲವು ಸಂದರ್ಭಗಳಲ್ಲಿ 500 ಇತ್ಯಾದಿ) ಗೊತ್ತುಪಡಿಸಲಾಯಿತು. ಅಂಥ ಪ್ರಬಂಧರಚನೆಯನ್ನು ಆಧುನಿಕ ಚಕ್ರಬಂಧ ಆಟಕ್ಕೆ ಹೋಲಿಸಬಹುದು. ಚೀನೀ ಸಾಹಿತ್ಯದ ಅಭ್ಯಾಸಿಗಳಿಗೆ ಇದೊಂದು ಸಾಹಿತ್ಯಕ ಹಿಂಸೆಯಾಗಿತ್ತು.

	ಇಂಥ ಅಹಿತ ಪ್ರವೃತ್ತಿಗಳಿದ್ದರೂ ಚೀನಿ ಸಾಹಿತ್ಯದಲ್ಲಿ ಉತ್ತಮ ಪ್ರಬಂಧಗಳಿಲ್ಲದಿಲ್ಲ. ವಿಶೇಷವಾಗಿ ಸಾಹಿತ್ಯ ವಿಮರ್ಶೆಗೆ ಸಂಬಂಧಪಟ್ಟಂತೆ ಶ್ರೇಷ್ಠ ಪ್ರಬಂಧಗಳಿವೆ. ಇಷ್ಟಾದರೂ ಇಂಗ್ಲಿಷ್ ಮತ್ತು ಫ್ರೆಂಚ್ ಸಾಹಿತ್ಯದಲ್ಲಿ ಕಂಡು ಬರುವ ಪರಿಪೂರ್ಣವಾದ ಹಾಗೂ ಉತ್ತಮ ಮಟ್ಟದ ಸಾಹಿತ್ಯ ವಿಮರ್ಶೆಯನ್ನು ನಾವೂ ಚೀನೀ ಸಾಹಿತ್ಯದಲ್ಲಿ ಕಾಣುವುದಿಲ್ಲ. ಆದರೆ ವೆನ್-ಷಿನ್ ಟಯೊ-ಲುಂಗ್ ಅಥವಾ ಸಾಹಿತ್ಯ ಹೃದಯಗೂಡಿನಿಂದ ಡ್ರೇಗನ್ ಪೆಡಂಭೂತವನ್ನು ಹೊತ್ತು ಬರುವುದು-ಎಂಬ ಸಾಹಿತ್ಯ ವಿಮರ್ಶಾ ಗ್ರಂಥವನ್ನು ಲಿಯುಷಿಯೆನ್ (ಕ್ರಿ.ಶ. 455-?) ರಚಿಸಿದ್ದಾನೆ. ವಿಶ್ವ ಸಾಹಿತ್ಯ ಚರಿತ್ರೆಯಲ್ಲಿ ಸಾಹಿತ್ಯ ವಿಮರ್ಶೆಗೆ ಸಂಬಂಧಪಟ್ಟ ಗ್ರಂಥಗಳಲ್ಲಿ ಇದರ ಸ್ಥಾನ ವಿಶಿಷ್ಟವಾದುದು.

	ಚೀನೀ ಸಾಹಿತ್ಯದಲ್ಲಿ ನಾಟಕ ಮತ್ತು ಕಾದಂಬರಿ ಬಹುಕಾಲದ ಮೇಲೆ ವೃದ್ಧಿಗೊಂಡವು. ಟಾಂಗ್ ಸಂತತಿಯ ಕಾಲದಲ್ಲಿ ಬುದ್ಧನ ಆಧ್ಯಾತ್ಮಿಕ ಬೋಧನೆಗಳಿಗೆ ಜನಸಾಮಾನ್ಯರನ್ನು ಆಕರ್ಷಿಸಲು ಬೌದ್ಧಮತ ಪ್ರಚಾರಕರು ಪಿಯೆನ್-ವೆನ್ ಅಥವಾ ಪರಿವರ್ತಿತ ಸಾಹಿತ್ಯವೆಂಬ ಶೈಲಿಯನ್ನು ಕಂಡುಹಿಡಿದರು.

	ಬೌದ್ಧಧರ್ಮಗ್ರಂಥಗಳ ಸ್ವಾರಸ್ಯವಾದ ಕಥೆಗಳನ್ನು ಮತ್ತು ಸ್ಫೂರ್ತಿದಾಯಕ ಆದರ್ಶಗಳನ್ನು ವರ್ಣಿಸಲು ಸರಳವಾದ ಹಾಗೂ ಆಡುಭಾಷೆಯ ಈ ಶೈಲಿಯನ್ನು ಬಳಸುತ್ತಿದ್ದರು. ಜನಸಾಮಾನ್ಯರಿಗೆ ಓದು ಬರೆಹ ತಿಳಿಯದ ಪ್ರಯುಕ್ತ ಪಿಯೆನ್ ವೆನ್ ಸಾಹಿತ್ಯವನ್ನು ಪ್ರಕಟಿಸುವ ಉದ್ದೇಶವಿರಲಿಲ್ಲ. ಕಥೆ ಹೇಳುವುದು ಇಲ್ಲವೆ ಜನರ ಮುಂದೆ ಸರಳ ಸಂಭಾಷಣೆಯ ನಾಟಕಗಳ ಅಭಿನಯ-ಈ ಉದ್ದೇಶಗಳಿಗೆ ಈ ಶೈಲಿ ಉಪಯುಕ್ತವಾಗಿತ್ತು; ಅದು ಚೀನೀ ಕಾದಂಬರಿ ಮತ್ತು ನಾಟಕಗಳಿಗೆ ಮೊದಲ ಹೆಜ್ಜೆ. ಚೀನೀ ಸಾಹಿತ್ಯದಲ್ಲಿ ಈ ಬಗೆಯ ಸಾಹಿತ್ಯರಚನೆಯನ್ನು ನಿಲ್ಲಿಸುವಂತೆ ಸಂಪ್ರದಾಯಬದ್ಧ ಪಂಡಿತರು ಒಂಬತ್ತನೆಯ ಶತಮಾನದ ಕೊನೆಯಲ್ಲಿ ಸರ್ಕಾರವನ್ನು ಒತ್ತಾಯಪಡಿಸಿದರು.

	ವಾಣಿಜ್ಯ ನಗರಗಳ ಬೆಳೆವಣಿಗೆ ಮತ್ತು ಮಧ್ಯಮವರ್ಗದ ಪಂಡಿತರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಹೀನ ಪರಿಸ್ಥಿತಿಗಳಿಂದ ಚೀನೀ ಸಾಹಿತ್ಯದಲ್ಲಿ ಬೃಹತ್ ಬದಲಾವಣೆಗಳಾದವು. ಸೂಂಗ್ ಸಂತತಿಯ ಕಾಲದಲ್ಲಿ ಚೀನದಲ್ಲಿ ವಾಣಿಜ್ಯ ಕ್ರಾಂತಿಯುಂಟಾಯಿತು. ವಾಣಿಜ್ಯ ವರ್ಗ ಅಪಾರ ಸಿರಿಯನ್ನು ಸಂಗ್ರಹಿಸಿಕೊಂಡು ಸಮಾಜದಲ್ಲಿ ಬಲಿಷ್ಠ ವರ್ಗವಾಯಿತು. ವ್ಯಾಪಾರಿಗಳು ಹಿಂದೆ ತಮಗೆ ದೊರಕದಿದ್ದ ಸಾಹಿತ್ಯಿಕ ಮನರಂಜನೆಯನ್ನು ಪಡೆಯತೊಡಗಿದರು. ಮತ್ತೊಂದು ಕಡೆ ಸರ್ಕಾರದಲ್ಲಿ ಹುದ್ದೆಗಳಿಗೆ ಸ್ವಜನರ ನೇಮಕ ಮತ್ತು ಭ್ರಷ್ಟಚಾರ ಹೆಚ್ಚಾಗಿ ಸರ್ಕಾರಿ ಆಡಳಿತದಲ್ಲಿ ವಿದ್ಯಾವಂತರಿಗೆ ಅವಕಾಶವಿಲ್ಲದೆ ಹೋಯಿತು. ಅನೇಕ ಸಾಹಿತಿಗಳಿಗೆ ಆಡಳಿತವರ್ಗದ ಪೋಷಣೆ ಇಲ್ಲದ ಅವರಲ್ಲಿ ಬಹುಮಂದಿ ಉಪಾಧ್ಯಾಯ, ವಕೀಲಿ ಮತ್ತು ಗುಮಾಸ್ತ ವೃತ್ತಿಗಳನ್ನು ಅನುಸರಿಸಿ, ಅವಿದ್ಯಾವಂತರಾದರೂ ಶ್ರೀಮಂತರಾಗಿದ್ದ ಜಮೀನದಾರರ ಮತ್ತು ವ್ಯಾಪಾರಿಗಳ ಸೇವೆಗೆ ನಿಂತರು. ಹಲವರು ಸಂಪ್ರದಾಯಬದ್ಧ ಚೀನೀ ಸಮಾಜದಲ್ಲಿ ಅತ್ಯಂತ ಕೀಳು ವೃತ್ತಿಯವರೆನಿಸಿದ ಕಲೆಗಾರರ ಸಹಪಾಟಿಗಳಾದರು. ಈ ಮಧ್ಯೆ ಬುದ್ಧಿಜೀವಿಗಳ ಹಾಗೂ ಸಾಮಾನ್ಯ ಜನರ ನಡುವಣ ವಿವಾಹಗಳೂ ಚೀನೀ ಸಾಹಿತ್ಯಕ್ಕೆ ಹೊಸ ಮಾರ್ಗವನ್ನು ಸೃಷ್ಟಿಸಿದುವು. ಕಾವ್ಯ ವೈಯಕ್ತಿಕ ಭಾವನೆಗಳ ಅಭಿವ್ಯಕ್ತಿಯೆನಿಸದೆ ಸಾಮಾನ್ಯ ಜನರ ಮನರಂಜನೆಗೆ ಸೃಷ್ಟಿಯಾಗತೊಡಗಿತು. ಅದು ಕಟ್ಟುನಿಟ್ಟಾಗಿ ಒಂದೇ ಮಾದರಿಯಲ್ಲಿರುತ್ತಿದ್ದ ಸಣ್ಣ ಭಾವಗೀತೆಗಳಿಂದ ಕಳಚಿಕೊಂಡು ನಾಟಕದ ಆಖ್ಯಾಯಿಕ ಸ್ವಗತ ಭಾಷಣ ಹಾಗೂ ಸಂಭಾಷಣೆಯ ರೂಪ ತಾಳಿತು. ಈ ರೀತಿ ಚೀನದಲ್ಲಿ ಸಂಗೀತ ನಾಟಕ ಹುಟ್ಟಿತು. ಯುಆನ್ ರಾಜಸಂತತಿಯ ಕಾಲದಲ್ಲಿ (1280-1368) ಗ್ವಾನ್ ಹಾನ್ ಚಿಂಗ್ ಮತ್ತು ವಾಂಗ್ ಷಿರ್ ಫು ಇವರಂಥ ಪ್ರಸಿದ್ಧ ಸಂಗೀತ ನಾಟಕ ರಚನಕಾರರಿದ್ದರು. ಈ ಇಬ್ಬರು ಸಾಹಿತಿಗಳು ಜೀವಿಸಿದ್ದ ವರ್ಷಗಳಾವುವೆಂಬುದು ನಮಗೆ ತಿಳಿದುಬಂದಿಲ್ಲ. ಅಂತರರಾಷ್ಟ್ರಿಯ ಖ್ಯಾತಿ ಪಡೆದ ಷಿ-ಷಿಯೆಂಗ್ ಚೀ (ಪಶ್ಚಿಮದ ಕೋಣೆ) ಷಿರ್‍ಫುನ ಪ್ರಸಿದ್ಧ ನಾಟಕ. 

	ಮಿಂಗ್ ಮತ್ತು ಚಿಂಗ್ ಸಂತತಿಗಳ ಕಾಲದಲ್ಲಿ, ಅಂದರೆ ಹದಿನಾಲ್ಕನೆಯ ಶತಮಾನದಿಂದಾಚೆಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಾದಂಬರಿ ಉಚ್ವಸ್ಥಾನ ಪಡೆದುಕೊಂಡಿತು. ಶ್ರೇಷ್ಠ ಕಾದಂಬರಿಗಳು ಒಂದರ ಮೇಲೊಂದರಂತೆ ಹೊರ ಬಂದವು, ಷಿರ್ ನೈ ಆನ್ (ಕ್ರಿ.ಶ. 1296?-1370?) ಬರೆದ ಷಯಿ-ಹು-ಚುಅನ್ (ನೀರಿನ ಅಂಚು); ಲೊ ಕುಅನ್-ಚುಂಗ್ (14ನೆ ಶತಮಾನ) ಬರೆದ ಸನ್-ಕುವೊ ಯೆನ್ ಈ (ಮೂರು ರಾಜ್ಯಗಳ ರಮ್ಯ ಕಥೆ); ವೂ ಚೆಂಗ್-ಎನ್ (1500?-1582) ಬರೆದ ಷಿ-ಯಿ-ಚೀ 16ನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಅನಾಮಿಕ ಲೇಖಕನೊಬ್ಬನ ಕೃತಿ ಚಿನ್ ಷಿಂಗ್-ಮೀ ಈ (ಸುವರ್ಣ ಕುಂಡದ ಪುಷ್ಪ); ಪು ಸುಂಗ್-ಸಿಂಗ್ (ಕ್ರಿ.ಶ. 1640-1715) ಬರೆದ ಜುಲಿನ್ ವೈಷಿಹಿ (ಪಂಡಿತರ ಕಥೆಗಳು); ಮತ್ತು ಟ್ಸೌ ಟ್ಸೂಷ್ ಚೀನ್ (1723?-1764) ಬರೆದ ಹಂಗ್-ಲೌ-ಮೆಂಗ್ (ಕೆಂಪು ಕೋಣೆಯ ಕನಸು)-ಇವು ಕೆಲವು ಪ್ರಸಿದ್ಧ ಕಾದಂಬರಿಗಳು. ಅವನತಿಗೆ ಬಂದ ಶ್ರೀಮಂತ ಕುಟುಂಬದ ವರ್ಣನೆ; ಆಸ್ಥಾನದ ಪರೀಕ್ಷೆಗಳ ಮುಖಾಂತರ ವಿಶಿಷ್ಟ ಜೀವನವನ್ನು ಸಾಗಿಸಬಹುದಾದ ಅವಕಾಶವನ್ನು ತ್ಯಾಗ ಮಾಡುವ ವಿದ್ಯಾವಂತನ ಚಿತ್ರ; ಐತಿಹಾಸಿಕ ವೀರರ ಕಥನ; ರಾಜಕೀಯ ಪ್ರಾಬಲ್ಯಕ್ಕಾಗಿ ಸ್ಫರ್ಧಿಸುವ ಉತ್ಸಾಹಿ ಯೋಧರ ಮತ್ತು ಪಂಡಿತರ ಜೀವನ; (ಕಾಲ್ಪನಿಕ ಹಾಗೂ ಆದ್ಭುತ ಶೈಲಿಯಲ್ಲಿ) ಭಾರತಕ್ಕೆ ಯಾತ್ರೆ ಹೊರಟ ಸಂನ್ಯಾಸಿ ಹ್ಯುಯೆನ್‍ತ್ಸಾಂಗನ ಪ್ರವಾಸ ಕಥನ; ವ್ಯಭಿಚಾರಿಯ ಅಥವಾ ಕಳ್ಳರಕೂಟದ ಕಥೆ-ಇವನ್ನು ವಸ್ತುವನ್ನಾಗಿ ಆರಿಸಿಕೊಂಡು ಕಾದಂಬರಿಕಾರರ ಹಿಂದಿನ ಮತ್ತು ಸಮಕಾಲೀನ ಚೀನಿ ಸಮಾಜದ ವಿವಿಧ ಮುಖಗಳನ್ನು ತೋರಿಸತೊಡಗಿದ.

		19ನೆಯ ಶತಮಾನದ ಮಧ್ಯಭಾಗದಿಂದ ಪಾಶ್ಚಾತ್ಯ ಸಾಮ್ರಾಜ್ಯಶಾಹಿ ಪ್ರಭುತ್ವ ಸಾಂಪ್ರದಾಯಿಕ ಚೀನೀ ಸಂಸ್ಕøತಿಯಲ್ಲಿ ಭಾರಿ ಬದಲಾವಣೆಗಳನ್ನು ತರಲಾರಂಭಿಸಿತು. ಪರಿಣಾಮವಾಗಿ ಪ್ರಾಚೀನ ಚೀನೀ ಸಾಹಿತ್ಯದ ಸೌಧವೇ ಕಳಚಿ ಬಿದ್ದಿತು. 19ನೆಯ ಶತಮಾನದ ಕೊನೆ ಹಾಗೂ 20ನೆಯ ಶತಮಾನದ ಮೊದಲಲ್ಲಿ ಬದುಕಿದ್ದ ಸಾಹಿತಿ ಲೂ ಷ್ಯನ್ ಆಧುನಿಕ ಚೀನೀ ಸಾಹಿತ್ಯದ ಜನಕನೆಂದು ಪ್ರಸಿದ್ಧನಾಗಿದ್ದಾನೆ. 1930ರಲ್ಲಿ ಮೇ 4ರ ಚಳವಳಿ ಸಾಂಪ್ರದಾಯಿಕವಾದ ಸಾಹಿತ್ಯಿಕ ಅಭಿವ್ಯಕ್ತಿಗಳನ್ನು ಕೊನೆಗಾಣಿಸಿತು. ಆಡುಭಾಷೆಯ, ಜನಪ್ರಿಯವಾದ ಹಾಗೂ ಕ್ರಾಂತಿಕಾರಿ ಸಾಹಿತ್ಯ ಪ್ರಾಬಲ್ಯಕ್ಕೆ ಬಂದಿತು. ಈ ಸಾಹಿತ್ಯ ಕಾಲದ ಅಗತ್ಯಗಳಿಗೆ ಹೊಂದಿಕೊಂಡಿದೆ. ಅದು ಸ್ವಾಭಾವಿಕವಾದದ್ದು, ಈ ನವಸಾಹಿತ್ಯದಿಂದ ಚೀನದ ಈಗಿನ ಅನೇಕ ರಾಜಕೀಯ ವ್ಯಕ್ತಿಗಳು ಕ್ರಾಂತಿಯನ್ನು ಕಂಡರು. ಆದರೆ ಈ ಸಾಹಿತ್ಯ ಕೇವಲ ಸಮಕಾಲೀನ ವಿಷಯಗಳೊಂದಿಗೆ ನಿಕಟವಾಗಿ ಬೆಸೆದುಕೊಂಡು, ತಾತ್ಕಾಲಿಕ ಮೌಲ್ಯಗಳನ್ನು ಹೊಂದಿ ಬದಲಾವಣೆ ಹೊಂದುತ್ತಿರುವ ಚೀನಿ ಸಮಾಜದಲ್ಲಿ ತ್ವರಿತವಾಗಿ ಅದೃಶ್ಯವಾಗುತ್ತಿದೆ. ಜಪಾನೀ ದಾಳಿಗಳ ವಿರುದ್ಧ ಸಾಹಸದಿಂದ ಹೋರಾಡಿದ ಕಾಲದಲ್ಲಿ ರಚಿಸಿದ ಸಾಹಿತ್ಯಿಕ ಶ್ರೇಷ್ಠ ಕೃತಿಗಳು ಇದಕ್ಕೆ ನಿದರ್ಶನ. ಚೀನೀ ರಾಜಕೀಯ ಮತ್ತು ಸಾಂಸ್ಕøತಿಕ ಜೀವನವು ಸ್ಥಿಮಿತ ಹಂತವನ್ನು ಮುಟ್ಟಿದಾಗ ಚೀನದ ಈ ಕ್ರಾಂತಿಕಾರಿ ನವ ಸಾಹಿತ್ಯದ ಮೌಲ್ಯಮಾಪನ ಸಾಧ್ಯವಾದೀತು. 									(ಟಿ.ಸಿ.ಎಚ್.)

	ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಚೀನೀ ಬರಹಗಾರರು ಸಮಕಾಲೀನ ಬದುಕಿನ ದೋಷ, ಕುರೂಪಗಳಿಗೆ ಕನ್ನಡಿ ಹಿಡಿದರು. ಸಾಹಿತ್ಯವು ಸಮಾಜದಲ್ಲಿನ ದುಷ್ಟತನವನ್ನು ಎದುರಿಸುವ ಆಯುಧವಾಯಿತು, ವರ್ಗಕಲಹದ ಪರಿಕಲ್ಪನೆಯನ್ನು ಹರಡುವ ಸಾಧನವಾಯಿತು. ಚೀನೀ ಸಾಹಿತ್ಯದ ಮನೋಧರ್ಮ ಬದಲಾಯಿತು, ಆದರೆ ಹಿನ್ನಡಿ, ಪಾತ್ರಗಳು, ಘಟನೆಗಳು ಎಲ್ಲಾ ಚೀನೀಯವಾಗಿ ಉಳಿದವು.

	1966ರಿಂದ 1978ರವರೆಗೆ ಸಂಸ್ಕøತಿ ಕ್ರಾಂತಿಯ ಅವಧಿ, ಸಾಹಿತಿಗಳು ಕಲಾವಿದರೂ ಜನತೆಯ ಅಗತ್ಯಗಳನ್ನು ಪೂರೈಸಬೇಕೆಂಬ ಆದೇಶದ ಕಾಲ `ಬೂಸ್ವಾರಸೀ ಪಾಶ್ಚಾತ್ಯ ಸಾಹಿತ್ಯವನ್ನು ಅದರ ಪ್ರಭಾವವನ್ನು ಉಗ್ರವಾಗಿ ವಿರೋಧಿಸಿದ ಕಾಲ. 1981ರಿಂದ ಈಚೆಗೆ ಸ್ವಲ್ಪ ಸ್ವಾತಂತ್ರ್ಯವು ಲಭ್ಯವಾಗಿದೆ. ಪಾಶ್ಚಾತ್ಯ ಸಾಹಿತ್ಯ ಮತ್ತು ಅದರ ಮೌಲ್ಯಗಳ ಬಗ್ಗೆ ಒಂದಿಷ್ಟು ಸಹನೆ ಕಾಣಬರುತ್ತಿದೆ.										(ಎಲ್.ಎಸ್.ಎಸ್)